ಇಂದು (ನ. 22) ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಹುಟ್ಟುಹಬ್ಬ

ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿದೆ. ಕನ್ನಡ ಸೇರಿದಂತೆ ತಮಿಳು, ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ ಈ ಸಿನಿಮಾವನ್ನು ಇದೇ ವರ್ಷ ತೆರೆಗೆ ತರುವ ಆಲೋಚನೆ ‘ಉದ್ಘರ್ಷ’ ತಂಡದ ಆಲೋಚನೆಯಾಗಿತ್ತು. ಕಾರಣಾಂತರಗಳಿಂದ ಜನವರಿಯಲ್ಲಿ ತೆರೆಗೆ ಬರಲಿದೆ ಉದ್ಘರ್ಷ.

ಹೊಸ ವರ್ಷಕ್ಕೆ ದೇಸಾಯಿ ಅವರಿಂದ ಗಿಫ್ಟ್ ಎಂದುಕೊಳ್ಳಬಹುದು. ನವೆಂಬರ್ 22ರಂದು ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ನೆಪದಲ್ಲಿ ಅವರು ಚಿತ್ರದ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.

ಚಿತ್ರದ ಹೆಸರಿನಿಂದಲೇ ಕುತೂಹಲ ಹುಟ್ಟಿಸುವಲ್ಲಿ ದೇಸಾಯಿ ಎತ್ತಿದ ಕೈ ಎಂಬುದರಲ್ಲಿ ಅನುಮಾನವಿಲ್ಲ. ತರ್ಕ, ನಿಷ್ಕರ್ಷ, ಸ್ಪರ್ಶ, ಸಂಘರ್ಷ ಸೇರಿದಂತೆ ಟೈಟಲ್‌ನಿಂದಲೇ ಕುತೂಹಲ ಮೂಡಿಸುವ ಮಾಸ್ಟರ್‌ಮೈಂಡ್ ಡೈರೆಕ್ಟರ್ ಎಂದೇ ಖ್ಯಾತಿ ಪಡೆದವರು ದೇಸಾಯಿ. ಇದೀಗ ‘ಉದ್ಘರ್ಷ’ ಮೂಲಕ ಕುತೂಹಲದ ಕಿಚ್ಚು ಹಚ್ಚಿರುವ ಅವರು, ತಮಿಳಿನಲ್ಲಿ ‘ಉಚ್ಚಕಟ್ಟಂ’ ಆಗಿ ತೆರೆಗೆ ತರುವ ತಯಾರಿಯಲ್ಲಿದ್ದಾರೆ.

‘ನಾನು ಮೊದಲಿನಿಂದಲೂ ಆಡಂಬರದ ಹುಟ್ಟುಹಬ್ಬ ಆಚರಿಸಿಕೊಂಡವನಲ್ಲ. ‘ಉದ್ಘರ್ಷ’ ಚಿತ್ರತಂಡದವರೆಲ್ಲಾ ‘ಬರ್ತ್‌ಡೇಗೆ ಏನಾದ್ರೂ ಮಾಡೋಣ ಸಾರ್’ ಅಂದ್ರು. ನಾನೇ ಅವೆಲ್ಲಾ ಬೇಡ ಅಂತ ಸುಮ್ಮನಾಗಿಸಿದೆ.

ಎಲ್ಲರೂ ಸೇರಿಕೊಂಡು ಸಿಂಪಲ್ಲಾಗಿ ಸಿಹಿ ತಿಂದರೆ ಅದಕ್ಕಿಂತ ಆಚರಣೆ ಮತ್ತೊಂದಿಲ್ಲ. ಹೀಗಾಗಿ ಯಾವುದೇ ಟ್ರೇಲರ್, ಟೀಸರ್, ಪೋಸ್ಟರ್ ಬಿಡುತ್ತಿಲ್ಲ. ಹೆಚ್ಚಾಗಿ ಈ ತಿಂಗಳಲ್ಲಿ ನಮ್ಮ ತಂಡದ ನಾಲ್ಕೈದು ಜನರ ಹುಟ್ಟುಹಬ್ಬ ನವೆಂಬರ್‌ನಲ್ಲೇ ಬಂದಿರೋದು ವಿಶೇಷ.

ನವೆಂಬರ್ 19 ರಂದು ನಮ್ಮ ಚಿತ್ರದ ಸಂಗೀತ ನಿರ್ದೇಶಕ ಸಂಜೋಯ್ ಚೌಧರಿ ಅವರ ಹುಟ್ಟುಹಬ್ಬವಿತ್ತು. ಹಾಗೆಯೇ ನವೆಂಬರ್ ೨೦ರಂದು ಚಿತ್ರದ ಪ್ರಮುಖ ಪಾತ್ರಧಾರಿ ಧನ್ಸಿಕಾರ ಬರ್ತ್‌ಡೇ ಇತ್ತು. ಅವರಿಗೆ ನಮ್ಮ ತಂಡದಿಂದ ಶುಭ ಕೋರಿದ್ದೇವೆ. ಈಗ ನನ್ನ ಸರದಿ. ನನ್ನ ತಂಡದವರದ್ದು ಇದೇ ತಿಂಗಳಲ್ಲಿ ಹುಟ್ಟುಹಬ್ಬವಿದೆ. ಹೀಗಾಗಿ ಒಂಥರಾ ಖುಷಿಯಿದೆ.

ಇನ್ನು ಚಿತ್ರದ ಬಗ್ಗೆ ಮಾತನಾಡುವುದಾದರೆ, ಸದ್ಯ ಡಿಟಿಎಸ್ ಅಂತಿಮ ಹಂತದಲ್ಲಿದೆ. ಇನ್ನೆರಡು ವಾರದಲ್ಲಿ ಫಸ್ಟ್ ಕಾಪಿ ಕೈ ಸೇರಲಿದೆ. ಅಲ್ಲಿಗೆ ಕನ್ನಡದ ‘ಉದ್ಘರ್ಷ’ ಸೆನ್ಸಾರ್ ಹಂತ ತಲುಪುತ್ತದೆ.

ಅದಾಗಿ ಒಂದೆರಡು ವಾರದ ಅಂತರದಲ್ಲಿ ತಮಿಳು ಮತ್ತು ತೆಲುಗು ವರ್ಷನ್ ಸಿದ್ಧಗೊಳ್ಳಲಿದೆ. ಡಿಸೆಂಬರ್ ಹೊತ್ತಿಗೆ ಸಿನಿಮಾ ಸಂಪೂರ್ಣವಾಗಿ ರೆಡಿಯಾಗಿರುತ್ತದೆ. ಜನವರಿಯಲ್ಲಿ ಸರಿಯಾದ ಸಮಯ ನೋಡಿಕೊಂಡು ಬಿಡುಗಡೆ ಮಾಡಲು ನಮ್ಮ ತಂಡ ಹಾಗೂ ವಿತರಕರ ಜೊತೆ ಮಾತುಕತೆಯಾಗಿದೆ.

ಎಲ್ಲರೂ ಚಿತ್ರದ ತಾರಾಬಳಗ ನೋಡಿ ನಿಬ್ಬೆರಗಾಗಿ ನೋಡಿದ್ದುಂಟು. ನನ್ನ ಕಥೆಗೆ ತಕ್ಕ ಆರ್ಟಿಸ್ಟ್‌ಗಳನ್ನ ಆರಿಸಿಕೊಂಡಿದ್ದೇನೆ. ಬಜೆಟ್ ಬಗ್ಗೆ ನಿರ್ಮಾಪಕರು ತಲೆ ಕೆಡಿಸಿಕೊಂಡಿಲ್ಲ. ಸಿನಿಮಾಕ್ಕೆ ಏನು ಬೇಕೋ ಅದನ್ನೆಲ್ಲಾ ಧಾರಾಳವಾಗಿ ಬಳಸುವ ಸ್ವಾತಂತ್ರ ಕೊಟ್ಟಿದ್ದಾರೆ. ಹಾಗಂತ ದುಂದುವೆಚ್ಚ ಮಾಡೋಕೆ ನನಗೆ ಇಷ್ಟವಿಲ್ಲ. ಸ್ಕ್ರಿಪ್ಟ್‌ನಲ್ಲಿ ಡಿಸೈನ್ ಮಾಡಿದಂತೆಯೇ ಸಿನಿಮಾ ಮಾಡಿ ಮುಗಿಸಿದ ಖುಷಿ ಹಾಗೂ ತೃಪ್ತಿ ನನಗಿದೆ.

ಒಟ್ಟಾರೆಯಾಗಿ 75 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಎಲ್ಲೂ ಕಾಂಪ್ರೋಮೈಸ್ ಆಗದೇ ಸಿನಿಮಾ ಮಾಡಲಾಗಿದೆ. ತಾರಾಗಣದ ಜೊತೆಗೆ ತಾಂತ್ರಿಕವಾಗಿಯೂ ಗಟ್ಟಿಯಾಗಿದೆ. ತುಂಬಾ ವರ್ಷಗಳ ಬಳಿಕ ನನ್ನ ಡೈರೆಕ್ಷನ್ ಟೀಂನಲ್ಲಿ ಒಳ್ಳೊಳ್ಳೆ ಅಸೋಸಿಯೇಟ್ಸ್ ಸಿಕ್ಕಿದ್ದಾರೆ. ಮುರಳಿ, ರಂಗ, ಅರ್ಜುನ್ ಸೇರಿದಂತೆ ಒಂಭತ್ತು ಜನರ ತಂಡ ನನ್ನ ಕೆಲಸವನ್ನ ಸರಾಗವಾಗಿ ಮಾಡಿ ಔಟ್‌ಪುಟ್ ಚೆನ್ನಾಗಿ ಬರಲು ಸಹಕರಿಸಿದ್ದಾರೆ’ ಎಂದರು ದೇಸಾಯಿ.

ಆರ್.ದೇವರಾಜ್ ನಿರ್ಮಾಣವಿರುವ ಈ ಚಿತ್ರದಲ್ಲಿ ಠಾಕೂರ್ ಅನೂಪ್ ಸಿಂಗ್, ಧನ್ಸಿಕಾ, ತಾನ್ಯ ಹೋಪ್, ಕಬೀರ್ ಸಿಂಗ್ ದುಹಾನ್, ಬಾಹುಬಲಿ ಖ್ಯಾತಿಯ ಪ್ರಭಾಕರ್, ಶ್ರದ್ಧಾ ದಾಸ್, ಹರ್ಷಿಕಾ ಪೂಣಚ್ಚ ಸೇರಿದಂತೆ ಸಾಕಷ್ಟು ಕಲಾವಿದರಿದ್ದಾರೆ. ಹೈದ್ರಾಬಾದ್, ಕೇರಳ, ಮಡಿಕೇರಿ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...