siddaganga ಶ್ರೀ ಅಂತಿಮ ದರ್ಶನಕ್ಕೆ ಬಾರದ ದಿಲ್ಲಿ ಪ್ರಭುತ್ವ

ತುಮಕೂರು: ಇಹ ಪಯಣ ಮುಗಿಸಿ ದೇವಗಣ ಸೇರಿಕೊಂಡ ಸಿದ್ಧಗಂಗಾ ಮಠಾಧೀಶ, ಶತಾಯುಷಿ, ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅಂತಿಮ ದರ್ಶನವನ್ನು ದಿಲ್ಲಿ ಪ್ರಭುತ್ವ ಸಂಪೂರ್ಣವಾಗಿ ಕಡೆಗಣಿಸಿರುವುದಕ್ಕೆ ಕನ್ನಡಿಗರ ಆಕ್ರೋಶ ಮುಗಿಲು ಮುಟ್ಟಿದೆ.

ದಿಲ್ಲಿ ಪ್ರಭುತ್ವ ರಾಜಕಾರಣಿಗಳ ಸಾವಿಗಷ್ಟೇ ಮಣೆ ಹಾಕುತ್ತದೆಯೇ ಹೊರತು ಸಮಾಜ ಸುಧಾರಕರಿಗಲ್ಲ ಎಂಬ ಅಮಶ ಮತ್ತೊಮ್ಮೆ ಸಾಬೀತಾಗಿದೆ. ಜೊತೆಗೆ ದಕ್ಷಿಣದ ರಾಜ್ಯಗಳ ಸಾಧಕರ ಬಗ್ಗೆ ದಿಲ್ಲಿ ಪ್ರಭುತ್ವದ ಅವಗಣನೆ ಸಹ ಇಲ್ಲಿ ದಿಗ್ಗೋಚರವಾಗಿದೆ.

ಇದನ್ನೂ ಓದಿ: ಶರಣು ದೇವ, ಹೋಗಿ ಬನ್ನಿ

ಕನಿಷ್ಟ ಪಕ್ಷ ಸಿದ್ಧಶಗಂಗಾ ಶ್ರೀಗಳಂತಹ ದಿವ್ಯ ಚೇತನದ ವಿಷಯದಲ್ಲಾದರೂ ದೇಶವಾಳುವ ಪ್ರಭುಗಳ ಚಿತ್ತ ಬದಲಾಗಬಹುದು ಎಂಬ ಎಣಿಕೆ ಸಹ ಹುಸಿಯಾಗಿದೆ.

ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಬಾರದಿರುವುದರ ಬಗ್ಗೆ ಭಾರೀ ಸಿಟ್ಟು ವ್ಯಕ್ತವಾಗಿದೆ. ಏನೇ ಕಾರ್‍ಯಕ್ರಮವಿದ್ದರೂ ಇಂತಹ ಮಹಾನ್ ಚೇತನಕ್ಕೆ ಕಡೆಯ ಬಾರಿಗೆ ನಮಿಸದಿರುವಷ್ಟು ಗೌಜಿ ಅವರಿಗೇನಿತ್ತು ಎಂದು ಸಾಮಾನ್ಯ ಜನ ಮಾತನಾಡಿಕೊಳ್ಳುತ್ತಿದ್ದಾರೆ.

siddaganga
mortal remains of siddaganga sri

ಸಿದ್ಧಗಂಗಾ ಶ್ರೀಗಳು ದೇಶ ನೀಡುವ ಯಾವುದೇ ಬಿರುದು-ಬಾವಲಿಗಳನ್ನು ಮೀರಿ ನಿಂತ ಮಹಾನ್ ಪರ್ವತ. ಅಂತಹ ವ್ಯಕ್ತಿಯ ಅಂತಿಮ ದರ್ಶನ ಪಡೆಯುವುದು ಪ್ರಧಾನಿಯಾದವರ ಸೌಜನ್ಯವೂ ಹೌದು. ಆದರೆ ಅದಾವುದೂ ಇಲ್ಲಿ ಲೆಕ್ಕಕ್ಕೇ ಬಾರದಿರುವುದು ಆ ದಿವ್ಯ ಪುರುಷನ ಭಕ್ತರಲ್ಲಿ ಭಾರಿ ನಿರಾಸೆ ಉಂಟು ಮಾಡಿದೆ.

ರಾಜಕೀಯ ಮುಖಂಡರಿಗೆ ಮಿಡಿಯುವ ಮನಸ್ಸುಗಳು ಶತಮಾನದ ಸಾರ್ಥಕ ಬದುಕನ್ನು ಬಾಳಿದ, ಇಡೀ ನಾಡಿಗೆ ಬೆಳಕಾಗಿದ್ದ ಚೇತನಕ್ಕೆ ಮಿಡಿಯದೇ ಹೋದವಲ್ಲ ಎಂದಯ ವಿಷಾದ ಕನ್ನಡಿಗರಲ್ಲಿ ಮನೆ ಮಾಡಿದೆ.

ಇದೇ ಮಾತು ರಾಷ್ಟ್ರಪತಿಗಳಿಗೂ ಅನ್ವಯವಾಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಮನಸ್ಸು ಮಾಡಿದ್ದರೇ ರಾಷ್ಟ್ರಪತಿ ಕೋವಿಂದ್ ಹಾಗೂ ಪ್ರಧಾನಿ ಮೋದಿ ಅವರಿಗೆ ನಡೆದಾಡುವ ದೇವರ ಅಂತಿಮ ದರ್ಶನ ಪಡೆಯುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ ಎಂಬುದು ಬೇರೆ ಮಾತು.

ಕಳಂಕಿತರು, ಆರೋಪಿತರ ಸಾವಿಗೆ ಖುದ್ದು ಹಾಜರಾಗುವ ಈ ಮಹಾನುಭಾವರು ನಿಷ್ಕಳಂಕ, ಸೇವಾ ಪ್ರಧಾನ ಚೇತನದ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳದಿರುವುದು ಅಕ್ಷಮ್ಯ ಎಂಬುದು ಸಿದ್ಧಗಂಗೆಯಲ್ಲಿ ನೆರೆದಿದ್ದ ಜನಸಾಗರದಲ್ಲಿ ಮಾರ್ದನಿಸಿದ ಮಾತಾಗಿತ್ತು.

ಅದೇ ರೀತಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿರುವ ರಾಹುಲ್ ಗಾಂಧಿ, ಅವರ ತಾಯಿ ಸೋನಿಯಾ ಗಾಂಧಿ, ಅಷ್ಟೇಕೆ ಅವರ ನೇರ ಪ್ರತಿನಿಧಿಯಾಗಿ ಒಬ್ಬ ಕಾಂಗ್ರೆಸಿಗನೂ ಕಾಣಿಸಿಕೊಳ್ಳದಿರುವುದು ಸಹ ತೀವ್ರ ಟೀಕೆಗೆ ಗುರಿಯಾಗಿದೆ.

ನಭೂತೋ ನಭವಿಷ್ಯತ್ ಎಂಬಂತೆ ನಾಡನ್ನು ಬೆಳಗಿದ ಆ ಪೂಜ್ಯ ಚೇತನದ ಅಂತಿಮ ದರ್ಶನಕ್ಕೆ ಬಾರದಿರುವುವ ಮೂಲಕ ಈ ಎಲ್ಲ ನಾಯಕರು ಕನ್ನಡಿಗರ ಮನಸ್ಸನ್ನು ಘಾಸಿಗೊಳಿಸಿದ್ದಾರೆ ಎಂಬುದಂತೂ ಸತ್ಯ. ಇದರಿಂದ ಅವರಿಗೆ ನಷ್ಟವೇ ಹೊರತು ಇಡೀ ನಾಡು ಆರಾಧಿಸಿದ, ರಾರಾಜಿಸಿದ ಪೂಜ್ಯರತ್ನರಿಗಲ್ಲ ಎಂಬುದು ಮತ್ತೂ ದಿಟ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...