ಸ್ವಾಮಿಗಳೇ, ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಯಾವ ಪುರುಷಾರ್ಥಕ್ಕೆ ಹೇಳಿ 

ಕುಡಿನೂರು ಜಗನ್ನಾಥ

ಪಂಪನ ಓದದ ನಿನ್ನಾ ನಾಲಗೆ… ಕನ್ನಡವೇ ಸತ್ಯ, ಕನ್ನಡವೇ ನಿತ್ಯ

ರಾಷ್ಟ್ರಕವಿ ಕುವೆಂಪು ಅವರ ಈ ಸಾಲು ಕೇಳದ, ಕೇಳಿ ರೋಮಾಂಚನಗೊಳ್ಳದ ಕನ್ನಡಿಗನೇ ಇಲ್ಲ. ಸ್ವಾಮಿಗಳೇ ಬಹುಶಃ ನೀವೂ ಈ ರೋಮಾಂಚನ ಅನುಭವಿಸಿರುತ್ತೀರಿ. ಕೇಳಿ ಪುಳಕಗೊಂಡಿರುತ್ತೀರಿ. ಆದರೆ ಅದೇ ನಿಮ್ಮ ಒಂದು ನಿರ್ಧಾರದಿಂದ ನಾಳೆ ನಮ್ಮ ಮಕ್ಕಳು ಪಂಪನನ್ನೇ ಓದದಂತಾದರೇ ಏನು ಗತಿ?

ಇಷ್ಟು ಪೀಠಿಕೆ ಏಕೆಂದರೆ, ಸ್ವಾಮಿ ಕನ್ನಡವನ್ನು ನಾವೇ ಉಳಿಸದಿದ್ದರೇ, ಇನ್ನಾರು ಉಳಿಸಿಯಾರು. ನಿಜ, ಆಡು ಭಾಷೆಗೆ ಎಂದೂ ಸಾವಿಲ್ಲ. ಜನರ ನಾಲಗೆಯ ಮೇಲೆ ಹರಿದಾಡುವ ಶಬ್ದಗಳು ಎಂದೂ ಅಳಿಯುವುದಿಲ್ಲ. ಹಾಗೆಯೇ ಕನ್ನಡವೂ ಸಹ ಎಂದೆಂದೂ ಅಳಿಯದು. ಆದರೆ…

kannada

ಆಡುವ ನಾಲಗೆಗಳಿಂದಲೇ ಕನ್ನಡ ಭಾಷೆಯನ್ನು ಕಿತ್ತುಕೊಂಡರೆ, ಅ, ಆ, ಇ. ಈ ಹೇಳಬೇಕಾದ ತೊದಲು ನಾಲಗೆಗಳಲ್ಲಿ A, B, C, D, E ಹೊರಳಿಸಿದರೇ…?

ಇದರ ಪರಿಣಾಮ ಊಹೆಗೂ ನಿಲುಕದ್ದು ಸ್ವಾಮಿ. ಮುಂದಿನ ವರ್ಷದಿಂದ ಸರಕಾರಿ ಶಾಲೆಗಳಲ್ಲಿ ಆಂಗ್ಲ (English) ಮಾಧ್ಯಮ ಕಲಿಸುವ ನಿಮ್ಮ ಹಠ ಏನ ಸಾದಿಸೀತು? ಇದರಿಂದ ಕನ್ನಡ ಉದ್ಧಾರವಾದೀತೇ?, ಇಲ್ಲ english ಬೆಳೆದೀತೇ?

ಈ ಎರಡೂ ಪ್ರಶ್ನೆಗಳಿಗೆ ಉತ್ತರ ಒಂದೆ. ಇಲ್ಲ, ಇಲ್ಲ, ಇಲ್ಲ… ಕನ್ನಡ ಕಲಿಯುವುದೇ ಅಪರಾಧ ಎಂಬಂತೆ ಇಂದಿನ ಜನಾಂಗ ನಡೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಸರಕಾರಿ ಶಾಲೆಗಳಲ್ಲಿ ಸಹ ಆಂಗ್ಲ ಮಾಧ್ಯಮ ಆರಂಭಿಸುವುದರ ಹಿಂದಿನ ಪುರುಷಾರ್ಥ ಏನು ಎಂಬುದನ್ನು ನೀವೇ ವಿವರಿಸಿ ಹೇಳಬೇಕಿದೆ.

ನಿಜ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷಿಲ್ಲದೇ (ಭಾರತಕ್ಕೆ ಅನ್ವಯವಾಗುವಂತೆ) ಬದುಕುವುದು ಕಷ್ಟ. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಇಂಗ್ಲೀಷ್‌ ಹೊಡೆತಕ್ಕೆ ಸಿಲುಕಿ ನರಳುತ್ತಿದ್ದಾರೆ. ಹೌದು, ಆದರೆ ಇದಕ್ಕೆ ಕಾರಣ ಯಾರು ಸ್ವಾಮಿ.

ಇರಲಿ ಕನ್ನಡದ ಮಕ್ಕಳಿಗೆ ಕೀಳರಿಮೆ ಉಂಟಾಗಬಾರದು ಎಂಬುದೇ ನಿಮ್ಮ ಘನ ಉದ್ದೇಶವಾಗಿದ್ದರೇ ಕನ್ನಡ ಶಾಲೆಗಳಲ್ಲಿ ದ್ವಿತೀಯ ಭಾಷೆಯಾಗಿ ಇಂಗ್ಲೀಷನ್ನು ಶೋಕಾಗಿ ಕಲಿಸಲು ಯಾರ ಅಡ್ಡಿ ಇದೆ. ಇಂಗ್ಲಿಷ್, ಕನ್ನಡದ ಜೊತೆಗೆ ಪೋಷಕರು ತಮ್ಮ ಮಕ್ಕಳಿಗೆ ಮತ್ತೊಂದು ಭಾಷೆ ಕಲಿಸಲು ತಕಾರಾರಾದರೂ ಏನು?

ಅದು ಬಿಟ್ಟು ಶಿಕ್ಷಣವನ್ನು ಹಣದ ದಂಧೆಯಾಗಿ ಮಾಡಿಕೊಂಡಿರುವ ಹಣಬುರುಕ ಖಾಸಗಿ ಶಾಲೆಗಳು ಮತ್ತು ದಿಲ್ಲಿ ಪ್ರಭುತ್ವದ ಸಿಬಿಎಸ್‌ಇ, ಐಸಿಎಸ್‌ಇ ಎಂಬ ಅಸಂಬದ್ಧ ಹೇರಿಕೆಗಳಿಗೆ ಉತ್ತರವಾಗಿ ನಾವೂ ನಮ್ಮ ಶಾಲೆಗಳನ್ನು ಆಂಗ್ಲಮಯವಾಗಿಸುವುದರಲ್ಲಿ ಯಾವ ಪುರುಷಾರ್ಥವಿದೆ.

ಈ ಪ್ರಶ್ನೆಗಳಿಗೆ ಸಮರ್ಪಕವಾದ ವಿವರಣೆ ಕೊಟ್ಟು ತಾವು ತಮ್ಮ ನಿರ್ಧಾರ ಜಾರಿಗೆ ತರುವುದಾದರೇ ಯಾರ ಅಭ್ಯಂತರವೂ ಇಲ್ಲ ಸ್ವಾಮಿ.

ಅದಕ್ಕೆ ಮುನ್ನ ಇಷ್ಟು ಯೋಚಿಸಿ. ನಾವು ನಮ್ಮವರ ವಿರುದ್ಧ, ಅಥವ ನಮ್ಮ ಇರುವಿಕೆಗೆ ಧಕ್ಕೆ ತರುತ್ತಿರುವವರ ವಿರುದ್ಧ ನಮ್ಮ ಶಕ್ತಿಗೆ ಅನುಗುಣವಾಗಿ ಹೋರಾಡಬೇಕೋ ಅಥವ ಅವರಿಗೆ ಶರಣಾಗಬೇಕೋ ಎಂಬುದು ಇಲ್ಲಿರುವ ಪ್ರಶ್ನೆ. ನಿಮ್ಮ ನಿರ್ಧಾರದಲ್ಲಿ ಇದಕ್ಕೆ ಉತ್ತರ ಕಾಣುತ್ತಿಲ್ಲ.

ಪ್ರತಿಯೊಂದು ಕನ್ನಡ ಶಾಲೆಯನ್ನೂ ಉನ್ನತೀಕರಣಗೊಳಿಸಿ, ವೃತ್ತಿಪರಗೊಳಿಸಿ ಅಲ್ಲಿ ಕಲಿಯಲು ಬರುವ ಎಲ್ಲ ಬಡಕ್ಕಳಿಗೂ ಕನ್ನಡದ ಜೊತೆಗೆ english ಅನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಿ, ಅವರ ಕೀಳರಿಮೆ ಕಳೆಯುವೆ ಎಂದು ನೀವು ನಿರ್ಧರಿಸಿದರೆ ಅದಕ್ಕೆ ಸಮಸ್ತ ಕನ್ನಡ ಗಣ ಉಘೇ ಎನ್ನುತ್ತದೆ.

ಅದು ಬಿಟ್ಟು ಕನ್ನಡ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶುರುವಿಟ್ಟುಕೊಳ್ಳುವುದು ಎಷ್ಟರಮಟ್ಟಿಗೆ ಸರಿ ನೀವೇ ಹೇಳಿ. ಈ ವಿಚಾರವಾಗಿ ಸಮಸ್ತ ಕನ್ನಡ ಜನರ ಅಭಿಪ್ರಾಯ ಸಂಗ್ರಹಿಸಿದರೆ ಅದು ನಿಮ್ಮ ನಿರ್ಧಾರಕ್ಕೆ ವಿರೋಧವನ್ನೇ ವ್ಯಕ್ತ ಮಾಡುತ್ತದೆ.

ಯುಗದ ಕವಿ ಬೇಂದ್ರೆ ತವರಲ್ಲಿ ಕನ್ನಡ ಜಾತ್ರೆಯ ತೇರು ಎಳೆಯಲು ಹೋರಟಿದ್ದೀರಿ. ನಿಮ್ಮಿಂದ ನ್ಯಾಯದ ನಿರೀಕ್ಷೆಯಲ್ಲಿರುವ ಕನ್ನಡ ಕುಲದವರನ್ನು ನಿರಾಸೆಗೊಳಿಸದಿರಿ.

ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯಾಗಿಯೇ ಕನ್ನಡ ಉಳಿಯಲಿ ಎಂಬುದೇ ಕಳಕಳಿ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...