amla ದಿನಕ್ಕೊಂದು ಬೆಟ್ಟದ ನೆಲ್ಲಿಕಾಯಿ ತಿಂದು ಆಯಸ್ಸು ಹೆಚ್ಚಿಸಿಕ್ಕೊಳ್ಳಿ!

amla ಬೆಟ್ಟದ ನೆಲ್ಲಿಕಾಯಿ ಅಮೃತಕ್ಕೆ ಸಮಾನ

ನೆಲ್ಲಿಕಾಯಿಯನ್ನು ತಿನ್ನಲು ಇಷ್ಟಪಡುವವರು ಯಾರಿಲ್ಲ ಹೇಳಿ? ಚಳಿಗಾಲದಲ್ಲಿ ನೆಲ್ಲಿಕಾಯಿ ( amla ) ಸೀಸನ್. ನೆಲ್ಲಿಕಾಯಿ ಹೆಸರು ಕೇಳಿದ ಕೂಡಲೆ ನಿಮ್ಮ ಬಾಯಲ್ಲಿ ನೀರೂರಲು ಆರಂಭವಾಗದಿದ್ದರೆ ನಿಮ್ಮ ನಾಲಿಗೆಯಲ್ಲಿರುವ ಸ್ವಾದ ಗ್ರಂಥಿಗಳು ಸತ್ತಿವೆ ಎಂದೇ ಅರ್ಥ. ಉಪ್ಪು ಖಾರ ಮಿಶ್ರಣವನ್ನು ಹಚ್ಚಿ ಚುರಕ್ ಅಂತ ಕಚ್ಚಿದಾಗ ಲಾವಾರಸದ ಬುಗ್ಗೆಯುಕ್ಕಿಸುವ ಮತ್ತು ಹಲ್ಲನ್ನು ಚುಳ್ ಎನ್ನಿಸುವ ನಾಡಿನ ನೆಲ್ಲಿಕಾಯಿ ಒಂದು ಬಗೆಯದಾದರೆ, ಔಷಧೀಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಒಗರು ಒಗರು ಬೆಟ್ಟದ ನೆಲ್ಲಿಕಾಯಿ.

ಕಾರ್ತೀಕ ಮಾಸದ ದೀಪಾವಳಿಯ ಉತ್ಥಾನ ದ್ವಾದಶಿಯಂದು ಆಚರಿಸಲಾಗುವ ತುಳುಸಿ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ದಂಡಿದಂಡಿಯಾಗಿರುವ ಕಾಣಸಿಗುವ ಹಸಿರು ಬಣ್ಣದ ದುಂಡಗಿನ ಬೆಟ್ಟದ ನೆಲ್ಲಿಕಾಯಿಗಳು. ಈ ದಿನದಂದು ತುಳಸಿಯನ್ನು ಶ್ರೀಕೃಷ್ಣ ಮದುವೆಯಾದ ಎಂದು ನಂಬುತ್ತಾರೆ. ತುಳಸಿ ಗಿಡದ ಜೊತೆ ಬೆಟ್ಟದ ನೆಲ್ಲಿಕಾಯಿ ಟೊಂಗೆಯನ್ನು ಇಟ್ಟು ಹೆಂಗಳೆಯರು ಪೂಜಿಸುತ್ತಾರೆ. ಬೆಟ್ಟದ ನೆಲ್ಲಿಕಾಯಿ ತುದಿ ಕತ್ತರಿಸಿ ತುಳಸಿಗೆ ಆರತಿ ಬೆಳಗುತ್ತಾರೆ.

ಅದೆಲ್ಲ ಸರಿ, ಒಗರು ಬೆಟ್ಟದ ನೆಲ್ಲಿಕಾಯಿ ತಿಂದು ನೀರು ಕುಡಿದಿದ್ದೀರಾ? ಒಂದ್ ಸಲ ಕುಡಿದು ನೋಡಿ. ಅಮೃತಕ್ಕೆ ಸಮಾನವಾದ ರುಚಿಯ ಸ್ವಾದವನ್ನು ಅನುಭವಿಸದಿದ್ದರೆ ಕೇಳಿ.

ಆಯಸ್ಸು ಹೆಚ್ಚುತ್ತದಂತೆ!

ಇದರಲ್ಲಿ ನೀರಿನಲ್ಲಿರುವ ಶೇಕಡಾ 80 ರಷ್ಟು ಖನಿಜಾಂಶ, ನೀರು, ಕಾರ್ಬೋಹೈಡ್ರೇಟ್, ಮತ್ತು ಪ್ರೊಟೀನ್ ಗಳಿರುವುದರಿಂದ ದೇಹಕ್ಕೆ ಬೇಕಾದ ಶಕ್ತಿ ಮತ್ತು ಸಾಮರ್ಥ್ಯ ಒದಗಿಸುತ್ತದೆ. ಸಹಜವಾಗಿ ದಿನಕ್ಕೊಂದು  ಬೆಟ್ಟದ ನೆಲ್ಲಿಕಾಯಿ ತಿಂದರೆ ನಮ್ಮ ಆಯಸ್ಸು ಹೆಚ್ಚುತ್ತದಂತೆ.

ಸಣ್ಣದಾಗಿ ಹೆಚ್ಚಿ ಉಪ್ಪು, ಮೊಸರು, ಇಂಗಿನ ಮಿಶ್ರಣದಲ್ಲಿ ಅದ್ದಿ ಬಿಸಿಲಲ್ಲಿ ಒಣಗಿಸಲು ಇಟ್ಟ ಹಸಿ ನೆಲ್ಲಿಕಾಯಿಯನ್ನು ತಿಂದಿದ್ದೀರಾ? ತಿಂದು ನೋಡಿ. ಉಪ್ಪು, ಹುಳಿಯ ನೆಲ್ಲಿಕಾಯಿಯನ್ನು ಚಪ್ಪರಿಸಿ ತಿನ್ನುತ್ತಿದ್ದರೆ ಬಾಯಿಯಲ್ಲಿ ಲಾಲಾರಸ ಜಲಪಾತವಾಗಿರುತ್ತದೆ, ಇನ್ನಷ್ಟು ತಿನ್ನಬೇಕೆಂಬ ಬಯಕೆ ಉತ್ಪತ್ತಿಯಾಗಿರುತ್ತದೆ.

ನೆಲ್ಲಿಕಾಯಿ ತಲೆಗೆ ಹಚ್ಚಿಕೊಂಡರೆ ಹೊಟ್ಟು ಹೋಗುತ್ತದೆ, ಹೇನು ನಿವಾರಣೆಯಾಗುತ್ತದೆ, ಕೂದಲು ಚೆನ್ನಾಗಿ ಬೆಳೆಯುತ್ತವೆ, ಕಚ್ಚಿ ತಿಂದರೆ ಗ್ಯಾಸ್, ಹುಳಗಳು ನಾಶವಾಗುತ್ತವೆ, ಜ್ಯೂಸ್ ಮಾಡಿ ಕುಡಿದರೆ ಅಸ್ತಮಾ ಕಡಿಮೆಯಾಗುತ್ತದೆ, ಮಲಬದ್ಧತೆ ನಿವಾರಣೆಯಾಗುತ್ತದೆ, ಜೀರ್ಣಶಕ್ತಿ ವೃದ್ಧಿಯಾಗುತ್ತದೆ. ಇದು ವಾತ, ಪಿತ್ತ, ಕಫ ಮೂರು ದೋಷಗಳನ್ನು ನಿವಾರಿಸಿ ದೇಹವನ್ನು ರೋಗಮುಕ್ತವನ್ನಾಗಿ ಮಾಡುತ್ತದೆ ಇತ್ಯಾದಿ ಇತ್ಯಾದಿ. ಬೆಟ್ಟದ ನೆಲ್ಲಿಕಾಯಿ ಬೆಟ್ಟದಷ್ಟು ಆರೋಗ್ಯ ಗುಣಗಳನ್ನು ಹೊಂದಿದೆ.

ಅಮೃತಕ್ಕೆ ಸಮಾನ

ಕಚೇರಿಗೆ ಹೋಗುವಾಗ ಒಂದು ಪ್ಲಾಸ್ಟಿಕ್ ಕವರಿನಲ್ಲಿ ಅಥವಾ ನ್ಯೂಸ್ ಪೇರಸಿನ ತುಂಡಿನಲ್ಲಿ ಹಸಿಹಸಿ ಮೊಸರು ನೆಲ್ಲಿಕಾಯಿ ತುಂಡುಗಳನ್ನು ಸುತ್ತಿಕೊಂಡು ಬಂದು ಊಟವಾದ ನಂತರ ಕದ್ದುಮುಚ್ಚಿ ಬಾಯಲ್ಲಿ ಹಾಕಿಕೊಳ್ಳಿ. ಅಪ್ಪಿತಪ್ಪಿ ಕೂಡ ಅಕ್ಕಪಕ್ಕದವರಿಗೆ ಅದನ್ನು ತೋರಿಸಬೇಡಿ ಏಕೆಂದರೆ ನೆಲ್ಲಿಕಾಯಿ ಅಮೃತಕ್ಕೆ ಸಮಾನ.

ಪತಂಜಲಿ ಆಯುರ್ವೇದಲ್ಲಿ ನೆಲ್ಲಿಕಾಯಿ

ಪತಂಜಲಿ ಆಯುರ್ವೇದದ ಪ್ರಕಾರ, ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಒಂದು ಚಮಚದಷ್ಟು ನೆಲ್ಲಿ ರಸವನ್ನು ಕುಡಿದರೆ ಗ್ಯಾಸ್ ತೊಂದರೆ, ಅಜೀರ್ಣತೆ ನಿವಾರಣೆಯಾಗುತ್ತದೆ. ಅದು ಬೆಳಗಿನ ಜಾವ ದೇಹದಲ್ಲಿ ವಿಶಿಷ್ಟ ಉಲ್ಲಾಸವನ್ನು ತುಂಬುತ್ತದೆ. ರಾತ್ರಿ ಊಟವಾದ ಮೇಲೆ ಕೂಡ ನೆಲ್ಲಿಕಾಯಿ ರಸವನ್ನು ಹೀರಬಹುದು ಅಥವಾ ಒಣಗಿಸಿಟ್ಟ ನೆಲ್ಲಿಕಾಯಿ ತುಂಡನ್ನು ಹಾಕಿಕೊಂಡು ಮಲಗಬಹುದು.

ಬೆಟ್ಟದ ನೆಲ್ಲಿಕಾಯಿಯ ಉತ್ಪನ್ನಗಳಿಗಂತೂ ಲೆಕ್ಕವೇ ಇಲ್ಲ. ನೆಲ್ಲಿಕಾಯಿಯನ್ನು ದುಂಡಗೆ ಉಪ್ಪಿನಕಾಯಿ ಹಾಕಿ ಇಡೀ ವರ್ಷ ಬಳಸಬಹುದು. ಇನ್ನು ಹಬ್ಬದ ಸಂದರ್ಭದಲ್ಲಿ ನೆಲ್ಲಿಕಾಯಿ ಹುಳಿಯ ಜೊತೆಗೆ ನೆಲ್ಲಿಕಾಯಿ ಗೊಜ್ಜು ಬಲು ಪಸಂದಾಗಿರುತ್ತದೆ. ಇದನ್ನು ರುಬ್ಬಿ ಚಟ್ನಿ ಕೂಡ ಮಾಡುತ್ತಾರೆ.

ನೆಲ್ಲಿಕಾಯಿ ಶರಬತ್ತು ದ್ರಾವಣವನ್ನು ತಯಾರಿಸಿ, ಫ್ರಿಜ್ಜಿನಲ್ಲಿಟ್ಟು ಆಗಾಗ ಜ್ಯೂಸ್ ಮಾಡುತ್ತ ಹೀರುತ್ತಿರಬಹುದು. ನೆಲ್ಲಿಕಾಯಿ ಜಾಮ್ ತಯಾರಿಸಿ ಚಪಾತಿಯೊಡನೆ ಮೆಲ್ಲುತ್ತಾರೆ. ನೆಲ್ಲಿಕಾಯಿ ಹೋಳಿಗೆಯನ್ನು ಕೂಡ ಮಾಡುವ ವಿಧಾನಗಳಿವೆ.

ಮಲಬದ್ಧತೆಗೆ ನೆಲ್ಲಿಕಾಯಿ

ಮಲ ವಿಸರ್ಜಿಸುವಾಗ ನೋವು, ರಕ್ತ ಬರುತ್ತಿದ್ದರೆ, ಬೇಯಿಸಿ ಒಣಗಿಸಿದ ನೆಲ್ಲಿಕಾಯಿ ಚೂರನ್ನು ಮೊಸರಿನೊಂದಿಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ. ಬೇಧಿಯಾಗುತ್ತಿದ್ದರೂ, ನೆಲ್ಲಿಕಾಯಿ ಸೇವನೆ ಒಳ್ಳೆಯದು.

ರಕ್ತ ಹೀನತೆಗೆ

ವಿಟಮಿನ್ ಸಿ ಅಂಶ ಹೇರಳವಾಗಿದ್ದು, ದೇಹದಲ್ಲಿ ಉಷ್ಣತೆ ಸಮತೋಲನದಲ್ಲಿಡುವುದಲ್ಲದೆ, ರಕ್ತ ಪರಿಚಲನೆಯನ್ನು ಸುಗಮವಾಗಿಸುವುದು. ರಕ್ತ ಹೀನತೆಯಿಂದ ಬಳಲುತ್ತಿರುವವರೂ ಇದರ ಸೇವನೆ ಮಾಡುವುದು ಉತ್ತಮ. ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ.

ಸೌಂದರ್ಯ ವರ್ಧಕ

ಮುಖದ ಕಾಂತಿಗೆ ನೆಲ್ಲಿಕಾಯಿ ಉತ್ತಮ. ನೆಲ್ಲಿಕಾಯಿ ಚೂರ್ಣ, ಕೂದಲು ಉದುರುವುದಕ್ಕೆ ಬಳಸುವ ಎಣ್ಣೆಗಳಲ್ಲಿ ಇದನ್ನು ಉಪಯೋಗಿಸಲಾಗುತ್ತದೆ. ಸೌಂದರ್ಯ ವರ್ಧಕವಾಗಿಯೂ ಇದನ್ನು ಬಳಸಲಾಗುತ್ತದೆ.

ಇದಲ್ಲದೆ, ಹೃದಯದ ಮಾಂಸಖಂಡಗಳಿಗೆ ಶಕ್ತಿ ಒದಗಿಸುವುದು, ವಯಸ್ಸಾಗದಂತೆ ತಡೆಗಟ್ಟುವುದು. ನೆಲ್ಲಿಕಾಯಿ ಸೇವನೆಯಿಂದ ಅನೇಕ ಉಪಯೋಗವಿದೆ. ನೆಲ್ಲಿಕಾಯಿ ಅಮೃತಕ್ಕೆ ಸಮಾನ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...