constitution ಕರ್ನಾಟಕದಲ್ಲಿ ಸೋತಿದ್ದು ಸಂವಿಧಾನದ ಆಶಯ!

constitution
constitution and parliament

constitution ಅಧಿಕಾರದ ಅದಲುಬದಲಿನಾಟ ಸಂವಿಧಾನದ ವಿಡಂಬನೆ

ಕುಡಿನೂರು ಜಗನ್ನಾಥ

ಅತೃಪ್ತ ಶಾಸಕರ ಒಡ್ಡೋಲಗ, ದೋಸ್ತಿ ಪಕ್ಷಗಳ ದಳ್ಳುರಿ ಮತ್ತು ( constitution ) ಬಿಜೆಪಿಯ ಬೀಗುವಿಕೆಯ ನಡುವೆ ಕಳೆದ 14 ದಿನಗಳಿಂದ ಕರ್ನಾಟಕದಲ್ಲಿ ನಡೆದ ಪ್ರಜಾಪ್ರಭುತ್ವದ ದೊಡ್ಡಾಟದಲ್ಲಿ ನಿಜಕ್ಕೂ ಸೋತಿದ್ದ ಸಂವಿಧಾನದ ಆಶಯ ಎಂದರೆ ತಪ್ಪಲ್ಲ.

ಇದನ್ನೂ ಓದಿ: ವಿಶ್ವಾಸಮತದಲ್ಲಿ ದೋಸ್ತಿಗೆ 99, ಬಿಜೆಪಿಗೆ 105: ಎಚ್ಡಿಕೆ ಸರಕಾರ ಪತನ

ಇಲ್ಲಿ ಯಾರೂ ಸಂವಿಧಾನವನ್ನು ಮೀರಲಿಲ್ಲ. ಆದರೂ ಸಂವಿಧಾನದ ಆಶಯಗಳನ್ನು ಉಳಿಸಲು ಯಾರೂ ಪ್ರಯತ್ನಿಸಲಿಲ್ಲ. ಹಾಗೆ ನೋಡಿದರೆ ಆ ಆಶಯಗಳ ಶವಪೆಟ್ಟಿಗೆಗೆ ಎಲ್ಲರೂ ಮೊಳೆ ಹೊಡೆದಿದ್ದಾರೆ.

ಜನರ ಆಶೋತ್ತರಗಳು ಕುದುರೆ ವ್ಯಾಪಾರದ ಸರಕಾಗಬಾರದು ಎಂಬ ಮಹದುದ್ದೇಶದಿಂದ 24 ವರ್ಷಗಳ ಹಿಂದೆ ಜಾರಿಗೆ ತರಲಾದ ಪಕ್ಷಾಂತರ ನಿಷೇಧ ಕಾಯಿದೆ ಮತ್ತು ತತ್ಸಂಬಂಧಿತ ಸಂವಿಧಾನದ 10ನೇ ಪರಿಚ್ಛೇದದ ತಿದ್ದುಪಡಿಯ ಮೂಲ ಉದ್ದೇಶ ಈ ಎಲ್ಲ ಬೆಳವಣಿಗೆಗಳಿಂದ ನಿಷ್ಫಲವಾಗಿದೆ.

ಪಕ್ಷದಿಂದ ಪಕ್ಷಕ್ಕೆ ಹಾರುವ ಅನೈತಿಕ ಪರಂಪರೆಗೆ ಮೂಗುದಾರ ಹಾಕುತ್ತದೆ ಎಂದು ನಂಬಲಾಗಿದ್ದ ಈ ತಿದ್ದುಪಡಿ, ಕಾನೂನುಗಳು ಕೇವಲ ಮೂಕಪ್ರೇಕ್ಷಕವಾಗಿವೆ ಅಥವ ಕಾಗದದಲ್ಲಿ ಮಾತ್ರ ಜೀವಂತವಿದೆ ಎಂಬುದು ಕರ್ನಾಟಕ, ತೆಲಂಗಾಣ, ಗೋವಾ ಅಷ್ಟೇಕೆ ರಾಜ್ಯಸಭೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಆದ ಬೆಳವಣಿಗೆಗಳಿಂದ ಸಾಬೀತಾಗಿದೆ.

ಕಾನೂನು ಮಾಡುವವರಿಗೆ ಅದರಿಂದ ಜಾರಿಕೊಳ್ಳುವುದು ಹೇಗೆ ಎಂಬುದರ ಸ್ಪಷ್ಟ ಅರಿವೂ ಇರುತ್ತದೆ ಮತ್ತು ಅಧಿಕಾರಕ್ಕಾಗಿ ಅಂತಹ ಮಾರ್ಗಗಳೂ ರುಜು ಮಾರ್ಗಗಳಾಗುತ್ತವೆ ಎನ್ನುವ ಅಂಶ ಮತ್ತೊಮ್ಮೆ, ಮಗದೊಮ್ಮೆ ಗೋಚರವಾಗಿದೆ.

ಶಾಲೆಯ ಮಾಸ್ಟರರ ಕೈಗೆ ದಂಡ ನೀಡಿ ಕ್ಲಾಸಿಗೆ ಹೋಗುವುದರಿಂದ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡುವುದಾದರೆ ಅದರಿಂದ ಏನಾಗಬಹುದು ಎಂಬ ಪ್ರಶ್ನೆಗೆ ಕರ್ನಾಟಕದ ರಾಜಕೀಯ ನಾಟಕದಲ್ಲಿ ಉತ್ತರ ಸಿಕ್ಕಂತಾಗಿದೆ.

ಎಲ್ಲ ಕನ್ನಡಿಯಲ್ಲೂ ಒಂದೇ ಬಿಂಬ ಕಾಣಬೇಕು ಎಂಬ ಹುಚ್ಚು ಹಂಬಲ ಕನ್ನಡಿಯ ಗುಣಲಕ್ಷಣವನ್ನೇ ಅಣಕಿಸುವಂಥಾದ್ದು ಎಂಬುದನ್ನು ರಾಜಕೀಯ ಪಕ್ಷಗಳು ಮತ್ತು ಅದರ ನೇತಾರರು ಅರಿಯದಿದ್ದರೇ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಎರಡೂಸವಕಲು ನಾಣ್ಯಗಳಾಗುವ ದಿನ ದೂರವಿಲ್ಲ.

ತಾಜಾ ಸುದ್ದಿಗಾಗಿ ePatrike ಆ್ಯಪ್‍ ಅನ್ನು ಡೌನ್‍ಲೋಡ್‍ ಮಾಡಿ. ಸುದ್ದಿ ಅಪ್‍ಡೇಟ್ಸ್ ಗಾಗಿ ePathrike facebook ಪುಟ ಲೈಕ್‍ ಮಾಡಿ.
Loading...